OnSwipe redirect code

Friday, June 8, 2012

ಧಾರ್ಮಿಕ ಬೋಧನೆಗಳಿಂದ ಇಹಲೋಕದ ಸಾಮಾನ್ಯ ಜೀವನಕ್ಕೆ ನೆರವು

ನಮ್ಮ ಸನಾತನ ಧರ್ಮದ ಸಿದ್ಧಾಂತಗಳನ್ನು, ವಿಚಾರಗಳನ್ನು, ರೀತಿ-ನೀತಿಗಳನ್ನು ಸಾರಿ ಹೇಳುವ ಗ್ರಂಥಗಳು ಅನೇಕ.  ಈ ಸನಾತನ ಧರ್ಮದ ಅಡಿಪಾಯಿ ಆಗಿರುವ ವೇದ-ಉಪನಿಷತ್ತುಗಳನ್ನು ಹೊರತುಪಡಿಸಿ ಇನ್ನೂ ಅನೇಕಾನೇಕ ಗ್ರಂಥಗಳು, ಮಂತ್ರಗಳು, ಸ್ತುತಿಗಳು, ಸ್ಮೃತಿಗಳೆಲ್ಲಾ ಇರುವುದು ನಮಗೆಲ್ಲರಿಗೂ ತಿಳಿದ ವಿಷಯವೇ. ನನಗೆ ಈ ಮಹಾಗ್ರಂಥಗಳಲ್ಲಿ ಸಾರಲಾಗಿರುವ ವಿಚಾರಗಳನ್ನು ತಿಳಿದುಕೊಳ್ಳುವ ಹಾಗೂ ಅರ್ಥಮಾಡಿಕೊಳ್ಳುವ ಆಸಕ್ತಿ ಇದೆ. ಇತ್ತೀಚಿನ ಕೆಲವು ದಿನಗಳಲ್ಲಿ, ಇಂತಹ ವಿಚಾರಗಳ ಬಗ್ಗೆ ಓದಿ ಚೆನ್ನಾಗಿ ತಿಳಿದುಕೊಂಡಿರುವ ನನ್ನ ಕೆಲವು ಸ್ನೇಹಿತರ ಜೊತೆ ಒಂದಿಷ್ಟು ಚರ್ಚೆ ಮಾಡಿದೆ, ಹಾಗೂ ಕೆಲವೊಂದು ಪುಸ್ತಕಗಳನ್ನು ಓದಿದೆ ಮತ್ತೆ ಒಂದೆರಡು ಪಾಠಗಳಿಗೆ ಹೋಗಿದ್ದೆ. ಸಾಧ್ಯವಾದಲ್ಲಿ ಹಿಂದೂ ಧರ್ಮವನ್ನು ಐತಿಹಾಸಿಕ ಭೂತಕನ್ನಡಿಯಿಂದಾನೂ ನೋಡಲು ಯತ್ನಿಸುತ್ತಿದ್ದೇನೆ.

ಇದುವರೆಗೆ ನನಗೆ ತಿಳಿದ ಮಟ್ಟಿಗೆ, ನಮ್ಮ ಬೋಧನೆಗಳನ್ನು ಹೀಗೆ ವಿಂಗಡಿಸಬಹುದು :
(ಬಹುಷ ಎಲ್ಲ ಧರ್ಮಗಳ ಬೋಧನೆಗಳನ್ನೂ ಇದೇ ರೀತಿ ವಿಂಗಡಿಸಬಹುದು)
೧. ಪದ್ಧತಿಗಳು  - ದಿನನಿತ್ಯ ಮಾಡಬೇಕಾದ ಪೂಜಾದಿ ಕರ್ಮಗಳು, ಏನು ತಿನ್ನಬೇಕು, ಯಾವ್ಯಾವ ಹಬ್ಬಗಳನ್ನು ಹೇಗೆ ಅಚರಿಸಬೇಕು, ಮುಂತಾದವು
೨. ಜೀವನ ನೀತಿಗಳು - ಸದಾ ಸತ್ಯವನ್ನು ನುಡಿಬೇಕು, ಬೇರೆಯವರನ್ನು ಗೌರವದಿಂದ ಕಾಣಬೇಕು, ಕಷ್ಟದಲ್ಲಿದ್ದವರಿಗೆ ಸಹಾಯ ಮಾಡಬೇಕು, ಮುಂತಾದವು
೩. ಆಧ್ಯಾತ್ಮಿಕ ಅಭ್ಯಾಸ -  ನಾನು ಅಂದರೆ ಯಾರು, ನಮ್ಮ ಜೀವನದ ಮೂಲ ಉದ್ದೇಶವೇನು, ಈ ವಿಶ್ವದ ಆದಿ-ಅಂತ್ಯಗಳ್ಯಾವು, ಮುಂತಾದವು

ನಾನು ನೋಡಿದಹಾಗೆ ಪಾಲನೆಯಲ್ಲಿ ಈ ಮೂರು ಭಾಗಗಳು ಹೆಚ್ಚುತ್ತಿರುವ ಕಷ್ಟದ ಕ್ರಮದಲ್ಲಿವೆ. ಅದಕ್ಕಾಗಿಯೇ ಧರ್ಮಾಚರಣೆ ಮಾಡುವವರಲ್ಲಿ ಪದ್ಧತಿಗಳನ್ನು ಪಾಲಿಸುವವರು ಎಲ್ಲಕಿಂತ ಹೆಚ್ಚಿನವರು, ಜೀವನ ನೀತಿಗಳನ್ನ ತಿಳಿದವರು, ಪಾಲಿಸುವವರು ಸ್ವಲ್ಪ ಕಡಿಮೆ. ಆಧ್ಯಾತ್ಮಿಕ ವಿಚಾರಗಳನ್ನು ತಿಳಿದು, ಅದರ ಬಗ್ಗೆ ಅಭ್ಯಾಸ ಮಾಡುವವರು ಇನ್ನೂ ವಿರಳ. ಪ್ರತಿಯೊಂದು ಭಾಗವು ಮುಂದಿನ ಭಾಗಕ್ಕೆ ಹೋಗಲು ಒಂದು ಹೆಜ್ಜೆ ಅಂತಾ ನಾನು ನಂಬಿದ್ದೇನೆ. ಆದರೆ ಬಹಳಷ್ಟು ಜನರು ಇದ್ದನು ತಿಳಿಯದೆ ಬಹತೇಕ ಪದ್ಧತಿಗಳಲ್ಲೇ ನಿಂತುಬಿಟ್ಟಿದ್ದಾರೆ. ಅದರಲ್ಲೂ ಬಹುಸಂಖ್ಯಾತರು ಆ ಪದ್ಧತಿಗಳ ಹಿಂದಿರುವ ಕಾರಣಗಳನ್ನು ತಿಳಿಯೋದಿಲ್ಲಾ. ಉದಾಹರಣೆಗೆ, ಮಂತ್ರಗಳನ್ನು ಅರ್ಥ ತಿಳಿಯದೆ ಬಾಯಿಪಾಠ ಮಾಡಿ ದಿನನಿತ್ಯ ಉಚ್ಛರಿಸುವುದು. ನಾನು ಮಾಡೋದು ಇದೆ. ನಾನು ಬಾಯಿಪಾಠ ಮಾಡಿದ ಎಷ್ಟೋ ಮಂತ್ರಗಳ ಅರ್ಥ ನನಗೆ ತಿಳಿದಿಲ್ಲಾ. ಅರ್ಥವನ್ನು ಕೇಳಿದಾಗ, ಅಥವಾ ಯಾವುದೋ ಒಂದು ಪದ್ಧತಿಯ ಹಿಂದಿರುವ ಕಾರಣ ಕೇಳಿದಾಗ ಸಮಾನ್ಯವಾಗಿ ಸಿಕ್ಕ ಉತ್ತರ ಇವುಗಳಲ್ಲಿ ಯಾವುದಾದರೊಂದು ಇರ್ತಿತ್ತು :
- ಯಾವುದೋ ಒಂದು ಗ್ರಂಥದಲ್ಲಿ ಅದನ್ನ ಮಾಡಬೇಕು ಅಂತ ಹೇಳಲಾಗಿದೆ.
- ಈ ಮಂತ್ರ ಹೇಳೋದರಿಂದ ಪಾಪಗಳೆಲ್ಲಾ ಕೆಳದು ಮೋಕ್ಷ ಸಿಗುತ್ತದೆ.
- ಇದರಿಂದ ಭಗವಂತ ಸಂತುಷ್ಟನಾಗಿ ನಿನಗೆ ಆಶೀರ್ವಾದ ಮಾಡುತ್ತಾನೆ.
ಇತ್ಯಾದಿ

ಆದರೆ ನನಗೆ ಅನಿಸೋದೇನಂದ್ರೆ ಈ ಬೋಧನೆಗಳು ಬರೀ ಮೋಕ್ಷ ಸಾಧನೆ ಅಲ್ಲದೆ ಇಹಲೋಕದ, ನಮ್ಮ ದಿನನಿತ್ಯದ ಜೀವನದಲ್ಲಿಯೂ ಉಪಯೋಗವಾಗುತ್ತುವೆ ಅಂತಾ. ಕೆಲವೊಂದು ಪುಸ್ತಕಗಳಲ್ಲಿ ಇದೇ ರೀತಿಯ ವಿಚಾರಗಳನ್ನು ಓದಿದ ನಂತರ ಅದು ಖಾತರಿಯೂ ಆಯಿತು. ಅದಕ್ಕೆ ಈಗ ನಾನು ಈ ಪದ್ಧತಿ ಹಾಗೂ ನೀತಿಗಳ ಹಿಂದಿರುವ ಕಾರಣ ಹಾಗು ಅರ್ಥಗಳನ್ನು ತಿಳಿಯೋಣ ಅಂತಾ ಯೋಚಿಸಿದ್ದೇನೆ. ಅದರ ಜೊತೆ ಇವುಗಳಿಂದ ಇದಲೋಕದ ಸಮಾನ್ಯ ಸಾಧನೆಗಳಿಗೆ ಏನು ಉಪಯೋಗ, ಅವುಗಳಿಂದ ನಮ್ಮ ಇಹಲೋಕದ ಜೀವನ ಹೇಗೆ ಉತ್ತಮಗೊಳ್ಳುತ್ತದೆ ಅಂತಾನೂ ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತೇನೆ

ಯೋಗಾಸನ, ಆಯುರ್ವೇದಂತಹ ಕೆಲವು ಪದ್ಧತಿಗಳ ಉಪಯೋಗ ತುಂಬಾ ಸರಳವಾಗಿಯೇ ಗೊತ್ತಾಗತ್ತೆ. ಮತ್ತೆ ಕೆಲವು ಪದ್ಧತಿಗಳ ಕಾರಣ ಅಥವಾ ಉಪಯೋಗ ತಿಳಿಯೋದು ಸ್ವಲ್ಪ ಕಷ್ಟ.  ಯಾಕಂದರೆ ಅವು ಆಗಿನ ಕಾಲಕ್ಕೆ ಉಪಯುಕ್ತವಾಗಿರಬಹುದು, ಆದರೆ ಈಗ ಅದು ಕೇವಲ ಒಂದು ರೂಢಿಯಾಗಿರಬಹುದು. ಹೀಗಾಗಿ ಅ ಪದ್ಧತಿ ಈಗಿನ ಕಾಲದಲ್ಲಿ ಉಪಯುಕ್ತವಿಲ್ಲದಿರಬಹುದು. ಇನ್ನು ಕೆಲವು ಬರೀ ಒಂದು ಜೀವನದ ಶೈಲಿ ಇರಬಹುದು. ಉದಾಹರಣೆಗೆ ಮಾಂಸಹಾರಿ ಊಟ. ಇದು ಕೆಟ್ಟದ್ದು ಅಂತಾ ಖಡಾಖಂಡಿತವಾಗಿ ಹೇಳೋದಕ್ಕೆ ಆಗೋದಿಲ್ಲಾ. ಹೊರತಾಗಿ "ನಮಗೆ ಅದು ಸೇರೋದಿಲ್ಲಾ, ಅದಕ್ಕಾಗಿ ನಾವು ಅದನ್ನ ತಿನ್ನಿವುದಿಲ್ಲಾ" ಅಂತಾ ಹೇಳಬಹುದು. ಇದು ನಮ್ಮ ಜೀವನ ಶೈಲಿ ಆಗತ್ತೆ. ನನ್ನ ಪ್ರಕಾರ ಇದಕ್ಕೂ ಮೋಕ್ಷ (ಅಂತಹದೊಂದು ಇದೇ ಅಂತಾದ್ರೆ) ಸಿಗೋದಕ್ಕೆ ಏನೂ ಸಂಬಂಧವಿಲ್ಲಾ.

ಇನ್ನು ನೀತಿಗಳ ಮಹತ್ವ ಹಾಗು ಪ್ರಾಮುಖ್ಯತೆ ನಾವೆಲ್ಲರು ಚಿಕ್ಕವಿರಿದ್ದಾಗಿನಿಂದಲೇ ನಾನಾ ಕಡೆ ಕೇಳುತ್ತಾ, ಓದುತ್ತಾ ಬಂದಿದ್ದೇವೆ. ಸುಮಾರು ನೀತಿಗಳನ್ನು ಧರ್ಮಾತೀತವಾಗಿ ಹೇಳಿಕೊಡಳಾಗುತ್ತದೆ. ಆದ್ದರಿಂದ ಇದರ ಮಹತ್ವ ತಿಳಿಯಲು ಹೆಚ್ಚೇನು ಕಷ್ಟಪಡಬೇಕಾಗಿಲ್ಲಾ. ಅದರೆ ಇವುಗಳ ಭೌತಿಕ ಉಪಯೋಗಗಳು ಅಷ್ಟು ನೇರವಾಗಿ ತಿಳಿಯೋಗಿಲ್ಲಾ. ಸಾಮಾನ್ಯವಾಗಿ ಧಾರ್ಮಿಕ ಉಪದೇಶಗಳಲ್ಲಿ "ಕರ್ಮ" ಹಾಗೂ "ಪುನರ್ಜನ್ಮದ" ವಿಚಾರಗಳನ್ನು ತಂದು, ಅದರಮೂಲಕ ಇವುಗಳ ಪ್ರಾಮುಖ್ಯತೆ ಮತ್ತು ಉಪಯೋಗವನ್ನು ಹೇಳುತ್ತಾರೆ. ಆದರೆ ಈ ಪುನರ್ಜನ್ಮ ಮತ್ತು ಕರ್ಮದಲ್ಲಿ ಅಷ್ಟೊಂದು ನಂಬಿಕೆ ಇಲ್ಲದಿರುವ ನಾನು ಇವುಗಳಿಂದ ಈ ಜನ್ಮದಲ್ಲೇ ಉಪಯೋಗಗಳಿವೆ ಅಂತ ನಂಬಿದ್ದೇನೆ. ಈ ನೀತಿಗಳನ್ನು ಪಾಲಿಸಿದ್ದರಿಂದ ಒಳ್ಳೆಯದಾಯ್ತು ಅನ್ನುವ ನಿಜ ಸಂಗತಿಗಳ ಬಗ್ಗೆ ತಿಳಿದು ಈ ನನ್ನ ನಂಬಿಕೆಯನ್ನು ಸಧೃಢ ಮಾಡುವ ಯೋಚನೆ ಇದೆ.

ಕೊನೆಯದಾಗಿ ಈ ಆಧ್ಯಾತ್ಮಿಕ ಅಭ್ಯಾಸ ಇದೆ ಅಲಾ, ಅದು ಸ್ವಲ್ಪ ಕಬ್ಬಿಣದ ಕಡ್ಲೆ ಇದ್ದಹಾಗೆ. ನನಗೆ ಅದರಲ್ಲಿರೋ ಜ್ಞಾನ ಅತ್ಯಲ್ಪ, ಹೌದೋ ಅಲ್ವೋ ಅನ್ನುವಷ್ಟು. ಇದರ ಬಗ್ಗೆ ಏನು ತಿಳಿದರೂ ಅದು ಹೊಸಾದೇ. ಹಾಗಾಗಿ ಏನು ತಿಳಿಯತ್ತೋ ಅದರ ಬಗ್ಗೆ ಬರದ್ರೆ ಆಯ್ತು ಅಂತಾ ಅನ್ಕೊಂಡಿದ್ದೇನೆ.

ನೋಡೋಣ ಈ ಕೆಲಸಾ ಎಲ್ಲಿವರೆಗೆ ನಡೆಯತ್ತೆ ಅಂತಾ ಮತ್ತೆ ಕೊನೆಗೆ ನನ್ನನ್ನ ಎಲ್ಲಿ ತಂದು ನಿಲ್ಲಿಸುತ್ತೆ ಅಂತಾ.

No comments:

Post a Comment